ಬಾರ್ನಾರ್ಡ್, ಕ್ರಿಶ್ಚಿಯನ್ ನೀತಿಂಗ್
1922. ಪ್ರಪ್ರಥಮವಾಗಿ ಹೃದಯ ನಾಟಿ ಮಾಡಿದ ಹೃದಯ ಶಸ್ತ್ರಕ್ರಿಯಾತಜ್ಞ. ದಕ್ಷಿಣ ಆಫ್ರಿಕದ ಬೋಫೋರ್ಟ್‍ವೆಸ್ಟ್ ಎಂಬಲ್ಲಿ ಜನನ. 8-11-1922. ದಕ್ಷಿಣ ಆಫ್ರಿಕದಲ್ಲಿಯೇ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿದ ಬಳಿಕ ಕೇಪ್ ಟೌನಿನ ಗ್ರೂಟ್‍ಶೂರ್ ಆಸ್ಪತ್ರೆಯಲ್ಲಿ ವಾಸ್ತವ್ಯ ಶಸ್ತ್ರವೈದ್ಯರಾಗಿದ್ದರು (ರೆಸಿಡೆಂಟ್ ಸರ್ಜನ್). 

ನವಜಾತ ಶಿಶುಗಳಲ್ಲಿ ಕೆಲವೊಮ್ಮೆ ಕರುಳಿನ ಒಂದು ಭಾಗ ಸಮರ್ಪಕವಾಗಿ ಬೆಳವಣಿಗೆ ಹೊಂದಿಲ್ಲದಿರುವುದು (ಇನ್‍ಟೆಸ್ಟೈನಲ್ ಅಟ್ರೀಸಿಯ) ಆ ಭಾಗಕ್ಕೆ ಸಾಕಷ್ಟು ರಕ್ತ ಸಂಚಾರವೊದಗದ್ದರಿಂದ ಎಂಬುದಾಗಿ ಆ ವೇಳೆಗೆ ಪತ್ತೆಹಚ್ಚಲಾಗಿತ್ತು. ಈ ಹೊಸ ತಿಳುವಳಿಕೆಯಿಂದಾಗಿ ಇಂಥ ಶಿಶುಗಳನ್ನು ಯುಕ್ತ ಶಸ್ತ್ರಕ್ರಿಯೆಗೆ ಒಳಪಡಿಸಿ ರಕ್ತ ಪೂರೈಕೆಯನ್ನು ಸರಿಪಡಿಸುವ ಒಂದು ವಿಧಾನಶೋಧನವಾಗಿ ಬಳಕೆಗೆ ಬಂತು. ಮಾರಕವೇ ಆದ ಈ ಆಜನ್ಮ ನ್ಯೂನತೆಯನ್ನು ಚಿಕಿತ್ಸಿಸುವ ಕ್ರಮ ತಿಳಿಯ ಬಂತು. ಮುಂದೆ ಬಾರ್ನಾರ್ಡ್ ಹೃತ್ಕುಕ್ಷಿ ಮತ್ತು ಹೃತ್ಕರ್ಣಗಳ ನಡುವಿನ ನೈಸರ್ಗಿಕ ಕವಾಟ ಕೆಟ್ಟುಹೋದಲ್ಲಿ ಅದನ್ನು ತೆಗೆದು ಅದರ ಸ್ಥಾನದಲ್ಲಿ ಜೋಡಿಸಲು ಸಾಧ್ಯವಾಗುವ ಕೃತಕ ಕವಾಟವನ್ನು ನಿರ್ಮಿಸಿದರು. ಈ ಕವಾಟಕ್ಕೆ ಬಾರ್ನಾರ್ಡ್ ಕವಾಟವೆಂದೇ ಹೆಸರು ಬಂದಿದೆ.

1956-58ರ ಅವಧಿಯಲ್ಲಿ ಬಾರ್ನಾರ್ಡ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿನ್ನೆಸೋಟ ರಾಜ್ಯದಲ್ಲಿ ಪದವಿಯೋತ್ತರ ವ್ಯಾಸಂಗ ಮಾಡಿ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಉತ್ತಮ ತರಬೇತಿ ಹೊಂದಿದರು. ದಕ್ಷಿಣ ಆಫ್ರಿಕಕ್ಕೆ ವಾಪಸಾದ ಬಳಿಕ ವಿವೃತ ಹೃದಯದ ಶಸ್ತ್ರಚಿಕಿತ್ಸಾ ತಂತ್ರವನ್ನು (ಓಪನ್‍ಹಾರ್ಟ್ ಆಪರೇಷನ್ ಟೆಕ್ನಿಕ್) ಪ್ರಥಮವಾಗಿ ಬಳಕೆಗೆ ತಂದರು. 1967 ಡಿಸೆಂಬರಿನಲ್ಲಿ ಇವರು ಕೇಪ್ ಟೌನಿನಲ್ಲಿ ಮರಣೋನ್ಮುಖನಾಗಿದ್ದ ಲೂಯಿಸ್ ವಾಶ್‍ಕಾಂಸ್ಕಿ ಎಂಬ ಕಿರಾಣಿ ವ್ಯಾಪಾರಿಯೊಬ್ಬನ ರೋಗ ಜರ್ಜರಿತ ಹೃದಯವನ್ನು ತೆಗೆದು ಹಾಕಿ ಅದರ ಸ್ಥಾನದಲ್ಲಿ ಆಗ ತಾನೇ ಅಪಘಾತವೊಂದರಲ್ಲಿ ಮಡಿದಿದ್ದ ಡೇನಿಸ್ ಡಾರ್ವಾಲ್ ಎಂಬ ತರುಣಿಯ ಹೃದಯವನ್ನು ನಾಟಿಹಾಕಿದರು. ಡೇನಿಸ್ ಡಾರ್ವಾಲ್ ಮೃತಪಟ್ಟ ಕೆಲವೇ ಮಿನಿಟುಗಳಲ್ಲಿ ಇನ್ನೂ ಜೀವಂತವಾಗಿದ್ದ ಹೃದಯವನ್ನು ಎದೆಗೂಡಿನಿಂದ ಹೊರತೆಗೆದು ಪೋಷಕ ದ್ರವ್ಯ ಒಂದರಲ್ಲಿರಿಸಿ ಬಳಿಕ ವಾಶ್‍ಕಾಂಸ್ಕಿಯ ಎದೆಗೂಡನ್ನು ಬಿಚ್ಚಿ ಅಲ್ಲಿಯ ಮಹಾಧಮನಿಗಳಿಗೆ ಪೋಣಿಸಲಾಯಿತು. ಈ ಶಸ್ತ್ರಕ್ರಿಯಾದ್ವಯಗಳನ್ನು ನಿರ್ವಹಿಸುತ್ತಿದ್ದ ಇಪ್ಪತ್ತು ಶಸ್ತ್ರಕ್ರಿಯಾಪಟುಗಳ ತಂಡದ ಮುಖಂಡತ್ವವನ್ನು ಬಾರ್ನಾರ್ಡ್ ವಹಿಸಿದ್ದರು. ಇಂಥ ಶಸ್ತ್ರಕ್ರಿಯೆಗಳನ್ನು ಪ್ರಯೋಗಾರ್ಥವಾಗಿ ಪ್ರಾಣಿಗಳ ಮೇಲೆ ಹಲವು ಬಾರಿ, ಪ್ರಪಂಚದ ಬೇರೆ ಬೇರೆ ವಿಜ್ಞಾನಿಗಳು ಮಾಡಿದ್ದರೂ ಮಾನವ ಹೃದಯದ ನಾಟಿಯನ್ನು ಮೊದಲು ಮಾಡಿದ ಕೀರ್ತಿ ಬಾರ್ನಾರ್ಡರ ತಂಡಕ್ಕೆ ಸಲ್ಲುತ್ತದೆ. ಈ ಶಸ್ತ್ರಕ್ರಿಯೆ ನಡೆದ ಒಂದು ವರ್ಷದೊಳಗೆ ಇಂಥ ನೂರಕ್ಕಿಂತ ಹೆಚ್ಚಿನ ಶಸ್ತ್ರಕ್ರಿಯೆಗಳನ್ನು ಪ್ರಪಂಚದ ನಾನಾ ದೇಶಗಳಲ್ಲಿ ಮಾಡಲಾಯಿತು. ಮುಂಬಯಿಯ ಶಸ್ತ್ರವೈದ್ಯ ಪಿ.ಕೆ.ಸೆನ್ ಈ ಸಾಲಿಗೆ ಸೇರಿದ್ದಾರೆ. ಪ್ರಪಂಚದಲ್ಲಿ ಯಾವುದೇ ವೈದ್ಯಕೀಯ ಕೌಶಲ್ಯಕ್ಕಿಂತ ಹೃದಯ ನಾಟಿ ಅಧಿಕ ಕುತೂಹಲಕಾರಿ ಎಂಬ ಭಾವ ಸಾಮಾನ್ಯ ಜನತೆಯಲ್ಲಿ ಪ್ರಚಾರವಾಯಿತು. ಇದರ ಕಾರಣ ಕೇವಲ ವೈದ್ಯಕೀಯವೊಂದೇ ಅಲ್ಲ, ಭಾವನಾತ್ಮಕವೂ ಹೌದು. ಕೇವಲ ವೈದ್ಯಕೀಯದ ದೃಷ್ಟಿಯಿಂದ ಹೇಳುವುದಾದರೆ ಹೃದಯವೆಂಬುದು ರಕ್ತವನ್ನು ರೇಚಿಸುವ ಒಂದು ಯಂತ್ರಿಕ ಸಾಧನ ಮಾತ್ರ. ಹೃದಯದ ನಾಟಿ ಇನ್ನೂ ಪ್ರಯೋಗದ ಹಂತದಲ್ಲಿಯೇ ಇದೆ. ಏಕೆಂದರೆ ಯಾವುದೇ ದೇಹ ಅನ್ಯಹೃದಯವನ್ನು ಸ್ವೀಕರಿಸಿ ಯಶಸ್ವಿಯಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ್ದು ಇನ್ನೂ ವರದಿ ಆಗಿಲ್ಲ.

ಒಂದು ರೋಗಿಯ ಹೃದಯ ಕಾರಣಾಂತರಗಳಿಂದ ಸಾಕಷ್ಟು ಕಾರ್ಯ ನಿರ್ವಹಣೆ ಮಾಡದಿದ್ದರೆ ತಾತ್ಕಾಲಿಕವಾಗಿ ಅವನ ಕ್ಷೀಣ ಹೃದಯಕ್ಕೆ ಪೂರಕವಾಗುವಂತೆ ಇನ್ನೊಬ್ಬ (ಅಕಸ್ಮಾತ್ತಾಗಿ ಹೃದಯ ರೋಗವಿಲ್ಲದೆ ಬೇರಾವುದೋ ಕಾರಣದಿಂದ ಮರಣ ಹೊಂದಿದವನ) ಹೃದಯವನ್ನು ರೋಗಿಯ ಹೃದಯದ ಮೇಲ್ಭಾಗದಲ್ಲಿ ಜೋಡಿಸುವ ಶಸ್ತ್ರಕ್ರಿಯೆಯನ್ನು ಬಾರ್ನಾರ್ಡ್ 1975ರಲ್ಲಿ ಪ್ರಯೋಗಾರ್ಥವಾಗಿ ಮಾಡಿದರು. ಇಲ್ಲಿ ಚಿಕ್ಕಮಕ್ಕಳು ಒಬ್ಬರೊಬ್ಬರ ಬೆನ್ನ ಮೇಲೆ ಕುಳಿತು ಕುದುರೆ ಆಟ ಆಡಿದಂತೆ ಎರಡು ಹೃದಯಗಳು ಒಂದರ ಮೇಲೊಂದು ಇದ್ದು ಒಂದಕ್ಕೊಂದು ಪೂರಕವಾಗಿ ಬಡಿಯುತ್ತವೆ. ಈ ಶಸ್ತ್ರಕ್ರಿಯೆ ಕೂಡ ಇನ್ನೂ ಪ್ರಯೋಗದ ಹಂತದಲ್ಲಿದೆಯಲ್ಲದೆ ಸಾಮಾನ್ಯ ಬಳಕೆಯಲ್ಲಿಲ್ಲ.	  		(ಎ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ